18 July 2021 KANNADA Murli Today | Brahma Kumaris

Read and Listen today’s Gyan Murli in Kannada

July 17, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಸದಾ ಉತ್ಸಾಹದಲ್ಲಿದ್ದು ಉತ್ಸವವನ್ನಾಚರಿಸಿ”

♫ ಕೇಳು ಇಂದಿನ ಮುರ್ಲಿ (audio)➤

ಇಂದು ವಿಶ್ವೇಶ್ವರ ತಂದೆಯು ತನ್ನ ವಿಶ್ವದ ಶ್ರೇಷ್ಠ ರಚನೆ ಅಥವಾ ಶ್ರೇಷ್ಠ ಆದಿ ರತ್ನಗಳೊಂದಿಗೆ ಅತಿಸ್ನೇಹಿ ಮತ್ತು ಸಮೀಪ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ವಿಶ್ವದ ಸರ್ವ ಆತ್ಮರು ವಿಶ್ವೇಶ್ವರ ತಂದೆಯ ಮಕ್ಕಳಾಗಿದ್ದಾರೆ ಆದರೆ ಬ್ರಾಹ್ಮಣ ಆತ್ಮರು ಅತಿ ಸ್ನೇಹಿ, ಸಮೀಪದ ಆತ್ಮರಾಗಿದ್ದೀರಿ ಏಕೆಂದರೆ ಬ್ರಾಹ್ಮಣ ಆತ್ಮಗಳು ಆದಿ ರಚನೆಯಾಗಿದ್ದೀರಿ. ತಂದೆಯ ಜೊತೆ ಜೊತೆಗೆ ಬ್ರಾಹ್ಮಣ ಆತ್ಮರೂ ಸಹ ಬ್ರಾಹ್ಮಣ ಜೀವನದಲ್ಲಿ ಅವತರಿತರಾಗಿದ್ದೀರಿ. ತಂದೆಯ ಕಾರ್ಯದಲ್ಲಿ ಸಹಯೋಗಿ ಆತ್ಮರಾಗುತ್ತೀರಿ. ಆದ್ದರಿಂದ ಬಾಪ್ದಾದಾ ಇಂದಿನ ದಿನದಂದು ಮಕ್ಕಳ ಬ್ರಾಹ್ಮಣ ಜೀವನದ ಅವತರಣೆಯ ಜನ್ಮ ದಿನವನ್ನು ಆಚರಿಸಲು ಬಂದಿದ್ದೇವೆ. ಮಕ್ಕಳು ತಂದೆಯ ಜನ್ಮ ದಿನವನ್ನು ಆಚರಿಸಲು ಉಲ್ಲಾಸ-ಉತ್ಸಾಹದಿಂದ ಖುಷಿಯಲ್ಲಿ ನರ್ತಿಸುತ್ತಿದ್ದೀರಿ. ಆದರೆ ಬಾಪ್ದಾದಾ ಮಕ್ಕಳ ಈ ಬ್ರಾಹ್ಮಣ ಜೀವನವನ್ನು ನೋಡಿ ಸ್ನೇಹ ಮತ್ತು ಸಹಯೋಗದಲ್ಲಿ ತಂದೆಯ ಜೊತೆ ಜೊತೆಗೆ ಪ್ರತೀ ಕಾರ್ಯದಲ್ಲಿ ಸಾಹಸದಿಂದ ಮುಂದುವರೆಯುತ್ತಿರುವುದನ್ನು ನೋಡಿ ಹರ್ಷಿತರಾಗುತ್ತಿದ್ದೇವೆ ಅಂದಾಗ ತಾವು ಬಾಪ್ದಾದಾರವರ ಜನ್ಮ ದಿನವನ್ನು ಆಚರಿಸುತ್ತೀರಿ ಮತ್ತು ತಂದೆಯು ಮಕ್ಕಳ ಜನ್ಮ ದಿನವನ್ನು ಆಚರಿಸುತ್ತಾರೆ. ತಾವು ಬ್ರಾಹ್ಮಣರದೂ ಜನ್ಮದಿನವಾಗಿದೆಯಲ್ಲವೆ ಆದ್ದರಿಂದ ಎಲ್ಲರಿಗೆ ಬಾಪ್ದಾದಾ, ಜಗದಂಬಾ ಮತ್ತು ತಮ್ಮ ಸರ್ವ ಜೊತೆಗಾರರಾದ ಅಡ್ವಾನ್ಸ್ ಪಾರ್ಟಿಯವರ ವಿಶೇಷ ಶ್ರೇಷ್ಠಾತ್ಮರ ಸಹಿತ ತಮ್ಮ ಅಲೌಕಿಕ ಬ್ರಾಹ್ಮಣ ಜನ್ಮದ ಸ್ನೇಹದಿಂದ ಸುವರ್ಣ ಪುಷ್ಫ ವರ್ಷದ ಸಹಿತ ಶುಭಾಷಯಗಳು ಶುಭಾಷಯಗಳು. ಇದು ಹೃದಯದ ಶುಭಾಷಯವಾಗಿದೆ, ಕೇವಲ ಬಾಯಿಯ ಶುಭಾಷಯವಲ್ಲ ಆದರೆ ಹೃದಯರಾಮ ತಂದೆಯ ಹೃದಯದ ಶುಭಾಷಯಗಳು ಸರ್ವಶ್ರೇಷ್ಠ ಆತ್ಮರಿಗೆ ಸನ್ಮುಖದಲ್ಲಿ ಕುಳಿತಿರಬಹುದು, ಮನಸ್ಸಿನಿಂದ ತಂದೆಯ ಸನ್ಮುಖದಲ್ಲಿ ಇರಬಹುದು, ನಾಲ್ಕಾರು ಕಡೆಯ ಮಕ್ಕಳಿಗೆ ಶುಭಾಷಯಗಳು, ಶುಭಾಷಯಗಳು.

ಇಂದಿನ ದಿನದಂದು ಭಕ್ತಾತ್ಮರ ಬಳಿ ತಂದೆಯ ಬಿಂದು ರೂಪದ ವಿಶೇಷ ಸ್ಮೃತಿಯಿರುತ್ತದೆ. ಶಿವ ಜಯಂತಿ ಅಥವಾ ಶಿವರಾತ್ರಿಯು ಯಾವುದೇ ಸಾಕಾರ ರೂಪದ ನೆನಪಾರ್ಥವಲ್ಲ. ನಿರಾಕಾರ ತಂದೆಯು ಜ್ಯೋತಿರ್ಬಿಂದು ಯಾವ ಶಿವಲಿಂಗದ ರೂಪದಲ್ಲಿ ಪೂಜಿಸುತ್ತಾರೆಯೋ ಆ ಬಿಂದುವಿನ ಮಹತ್ವಿಕೆಯಾಗಿದೆ. ತಮ್ಮೆಲ್ಲರ ಹೃದಯದಲ್ಲಿ ತಂದೆಯ ಬಿಂದು ರೂಪದ ಸ್ಮೃತಿ ಸದಾ ಇರುತ್ತದೆ ಅಂದಾಗ ತಾವೂ ಬಿಂದು ಮತ್ತು ತಂದೆಯೂ ಬಿಂದು ಆದ್ದರಿಂದ ಇಂದಿನದಿನ ಭಾರತದಲ್ಲಿ ಪ್ರತಿಯೊಬ್ಬ ಭಕ್ತಾತ್ಮನಲ್ಲಿ ವಿಶೇಷ ಬಿಂದು ರೂಪದ ಮಹತ್ವಿಕೆಯಿರುತ್ತದೆ. ಬಿಂದು ಎಷ್ಟು ಸೂಕ್ಷ್ಮವಾಗಿದೆಯೋ ಅಷ್ಟೇ ಶಕ್ತಿಶಾಲಿಯಾಗಿದೆ. ಆದ್ದರಿಂದ ಬಿಂದು ತಂದೆಯನ್ನು ಜ್ಞಾನ, ಗುಣ, ಶಕ್ತಿಗಳ ಸಿಂಧು ಅರ್ಥಾತ್ ಸಾಗರ ಎಂದು ಹೇಳಲಾಗುತ್ತದೆ ಅಂದಾಗ ಇಂದು ಎಲ್ಲಾ ಮಕ್ಕಳ ಹೃದಯದಲ್ಲಿ ಜನ್ಮ ದಿನದ ವಿಶೇಷ ಉತ್ಸಾಹದ ಅಲೆಯು ಅಮೃತವೇಳೆಯಿಂದಲೂ ಬಾಪ್ದಾದಾರವರ ಬಳಿ ತಲುಪುತ್ತಿದೆ. ಹೇಗೆ ತಾವು ಮಕ್ಕಳು ವಿಶೇಷ ಸೇವಾರ್ಥವಾಗಿ ಹಾಗೂ ಸ್ನೇಹ ಸ್ವರೂಪರಾಗಿ ತಂದೆಯ ಬಾವುಟವನ್ನು ಹಾರಿಸಿದಿರಿ. ತಂದೆಯೂ ಸಹ ಯಾವ ಬಾವುಟವನ್ನು ಹಾರಿಸಿದರು? ತಾವೆಲ್ಲರೂ ಶಿವ ತಂದೆಯ ಧ್ವಜವನ್ನು ಹಾರಿಸಿದಿರಿ. ತಂದೆಯು ಈ ಧ್ವಜವನ್ನು ಹಾರಿಸುವರೇ? ಇದು ಸೇವೆಯ ಸಾಕಾರ ರೂಪದ ಜವಾಬ್ದಾರಿಯನ್ನು ಮಕ್ಕಳಿಗೆ ಕೊಟ್ಟರು. ತಂದೆಯೂ ಸಹ ಧ್ವಜವನ್ನು ಹಾರಿಸಿದರು ಆದರೆ ಯಾವ ಧ್ವಜ ಮತ್ತು ಎಲ್ಲಿ ಹಾರಿಸಿದರು? ಬಾಪ್ದಾದಾರವರು ತಮ್ಮ ಹೃದಯದಲ್ಲಿ ಎಲ್ಲಾ ಮಕ್ಕಳ ವಿಶೇಷತೆಗಳ, ಸ್ನೇಹದ ಧ್ವಜವನ್ನು ಹಾರಿಸಿದರು. ಎಷ್ಟು ಧ್ವಜಗಳನ್ನು ಹಾರಿಸಿರಬಹುದು? ಈ ಪ್ರಪಂಚದಲ್ಲಿ ಇಷ್ಟೊಂದು ಧ್ವಜಗಳನ್ನು ಮತ್ತ್ಯಾರೂ ಹಾರಿಸಲು ಸಾಧ್ಯವಿಲ್ಲ, ಎಷ್ಟು ಸುಂದರ ದೃಶ್ಯವಿರಬಹುದು!

ಒಬ್ಬೊಬ್ಬ ಮಗುವಿನ ವಿಶೇಷತೆಯ ಧ್ವಜವು ಬಾಪ್ದಾದಾರವರ ಹೃದಯದಲ್ಲಿ ಹಾರುತ್ತಿದೆ, ಕೇವಲ ತಾವೆಲ್ಲರೂ ಧ್ವಜವನ್ನು ಹಾರಿಸಲಿಲ್ಲ ಆದರೆ ಬಾಪ್ದಾದಾರವರೇ ಹಾರಿಸಿದರು. ಈ ಧ್ವಜವನ್ನು ಹಾರಿಸುವಾಗ ಏನಾಗುತ್ತದೆ? ಹೂವಿನ ಮಳೆ ಸುರಿಯುತ್ತದೆ. ಹಾಗೆಯೇ ಬಾಪ್ದಾದಾರವರೂ ಸಹ ಮಕ್ಕಳ ವಿಶೇಷತೆಯ ಸ್ನೇಹದ ಧ್ವಜವನ್ನು ಹಾರಿಸುವಾಗ ಯಾವ ಮಳೆ ಸುರಿಯುತ್ತದೆ? ಪ್ರತಿಯೊಬ್ಬ ಮಗುವಿನ ಮೇಲೆ “ಅವಿನಾಶಿ ಭವ” “ಅಮರ ಭವ” “ಅಚಲ-ಅಡೋಲ ಭವ” – ಈ ವರದಾನಗಳ ಮಳೆ ಸುರಿಯುತ್ತದೆ. ಈ ವರದಾನಗಳೇ ಬಾಪ್ದಾದಾರವರ ಅವಿನಾಶಿ ಅಲೌಕಿಕ ಪುಷ್ಫಗಳಾಗಿವೆ. ಬಾಪ್ದಾದಾರವರದು ಈ ಅವತರಣಾ ದಿವಸ ಅರ್ಥಾತ್ ಶಿವ ಜಯಂತಿ ದಿವಸದಂದು ಮಕ್ಕಳಿಗಿಂತಲೂ ಹೆಚ್ಚು ಖುಷಿಯಿದೆ. ಖುಷಿಯಲ್ಲಿ ಖುಷಿಯಿದೆ ಏಕೆಂದರೆ ಈ ಅವತರಣೆಯ ದಿವಸವನ್ನು ಪ್ರತೀ ವರ್ಷ ನೆನಪಾರ್ಥವನ್ನಂತೂ ಆಚರಿಸುತ್ತಾರೆ ಆದರೆ ಯಾವಾಗ ಸಾಕಾರ ಬ್ರಹ್ಮಾರವರ ತನುವಿನಲ್ಲಿ ತಂದೆಯ ಅವತರಣೆಯಾದಾಗ ಬಾಪ್ದಾದಾರವರಿಗೆ ಅದರಲ್ಲಿಯೂ ವಿಶೇಷವಾಗಿ ಶಿವ ತಂದೆಗೆ ವಿಶೇಷವಾಗಿ ಈ ಮಾತಿನ ಖುಷಿಯಿರುತ್ತದೆ – ಎಷ್ಟೊಂದು ಸಮಯದಿಂದ ತನ್ನ ಸಮೀಪ ಸ್ನೇಹೀ ಮಕ್ಕಳಿಂದ ಅಗಲಿ ಪರಮಧಾಮದಲ್ಲಿದ್ದೆನು, ಭಲೆ ಪರಮಧಾಮದಲ್ಲಿ ಆತ್ಮಗಳೂ ಇರುತ್ತಾರೆ ಆದರೆ ಯಾರು ಮೊದಲ ರಚನೆಯ ಆತ್ಮಗಳಿದ್ದೀರೋ, ತಂದೆಯ ಸಮಾನರಾಗುವ ಸೇವೆಯ ಜೊತೆಗಾರ ಆತ್ಮಗಳಿದ್ದೀರೋ ಅವರು ಎಷ್ಟೊಂದು ಸಮಯದ ನಂತರ ಅವತರಿತರಾದಾಗ ಪುನಃ ಬಂದು ಮಿಲನ ಮಾಡುತ್ತೀರಿ! ಎಷ್ಟೊಂದು ಸಮಯದಿಂದ ಅಗಲಿರುವ ಶ್ರೇಷ್ಠಾತ್ಮರು ಪುನಃ ಬಂದು ಮಿಲನ ಮಾಡುತ್ತೀರಿ! ಒಂದುವೇಳೆ ಯಾರಾದರೂ ಅತಿಸ್ನೇಹಿ ಅಗಲಿರುವವರು ಮತ್ತೆ ಸಿಕ್ಕಿಬಿಟ್ಟರೆ ಖುಷಿಯಲ್ಲಿಯೂ ವಿಶೇಷವಾಗಿ ಖುಷಿಯಾಗುತ್ತದೆಯಲ್ಲವೆ. ಅವತರಣೆಯ ದಿವಸ ಅರ್ಥಾತ್ ತನ್ನ ಆದಿರಚನೆಯೊಂದಿಗೆ ಪುನಃ ಮಿಲನ ಮಾಡುವ ದಿವಸವಾಗಿದೆ. ನಮಗೆ ತಂದೆಯು ಸಿಕ್ಕಿಬಿಟ್ಟರು ಎಂದು ತಾವು ಯೋಚಿಸುತ್ತೀರಿ ಮತ್ತು ನನಗೆ ಮಕ್ಕಳು ಸಿಕ್ಕಿಬಿಟ್ಟರು ಎಂದು ತಂದೆಯು ಹೇಳುತ್ತಾರೆ ಅಂದಾಗ ತಂದೆಗೆ ತನ್ನ ಆದಿರಚನೆಯ ಮೇಲೆ ಹೆಮ್ಮೆಯಿದೆ. ತಾವೆಲ್ಲರೂ ಆದಿರಚನೆಯಲ್ಲವೆ, ಕ್ಷತ್ರಿಯರಂತೂ ಅಲ್ಲತಾನೆ? ಎಲ್ಲರೂ ಸೂರ್ಯವಂಶಿ ಆದಿ ರಚನೆಯಾಗಿದ್ದೀರಿ. ಬ್ರಾಹ್ಮಣರಿಂದ ದೇವತೆಗಳಾಗುತ್ತೀರಲ್ಲವೆ ಅಂದಾಗ ಬ್ರಾಹ್ಮಣ ಆತ್ಮರು ಆದಿ ರಚನೆಯಾಗಿದ್ದೀರಿ. ಅನಾದಿ ರಚನೆಯಂತೂ ಎಲ್ಲರೂ ಆಗಿದ್ದಾರೆ, ಇಡೀ ವಿಶ್ವದ ಆತ್ಮರು ಅನಾದಿ ರಚನೆಯಾಗಿದ್ದಾರೆ ಆದರೆ ತಾವು ಅನಾದಿ ಮತ್ತು ಆದಿ ರಚನೆಯಾಗಿದ್ದೀರಿ ಆದ್ದರಿಂದ ಡಬಲ್ ನಶೆಯಿದೆಯಲ್ಲವೆ.

ಇಂದಿನ ದಿನದಂದು ಬಾಪ್ದಾದಾ ವಿಶೇಷವಾಗಿ ಒಂದು ಸ್ಲೋಗನ್ ಕೊಡುತ್ತಿದ್ದೇವೆ – ಇಂದಿನ ದಿನಕ್ಕೆ ಉತ್ಸವದ ದಿನವೆಂದು ಹೇಳಲಾಗುತ್ತದೆ. ಶಿವರಾತ್ರಿ ಅಥವಾ ಶಿವ ಜಯಂತಿ ಉತ್ಸವವನ್ನು ಆಚರಿಸುತ್ತಾರೆ, ಉತ್ಸವದ ದಿನದ ಇದೇ ಸ್ಲೋಗನ್ ನೆನಪಿಟ್ಟುಕೊಳ್ಳಿ – ಬ್ರಾಹ್ಮಣ ಜೀವನದ ಪ್ರತೀ ಘಳಿಗೆಯು ಉತ್ಸವದ ಘಳಿಗೆಯಾಗಿದೆ. ಬ್ರಾಹ್ಮಣ ಜೀವನ ಅರ್ಥಾತ್ ಸದಾ ಉತ್ಸವವನ್ನು ಆಚರಿಸುವುದು. ಸದಾ ಉತ್ಸಾಹದಲ್ಲಿ ಇರುವುದು ಮತ್ತು ಸದಾ ಪ್ರತೀ ಕರ್ಮದಲ್ಲಿ ಆತ್ಮನಿಗೆ ಉತ್ಸಾಹ ತರಿಸುವುದಾಗಿದೆ ಅಂದಾಗ ಉತ್ಸವವನ್ನು ಆಚರಿಸಬೇಕು, ಉತ್ಸಾಹದಲ್ಲಿ ಇರಬೇಕು ಮತ್ತು ಉತ್ಸಾಹ ತರಿಸಬೇಕಾಗಿದೆ. ಎಲ್ಲಿ ಉತ್ಸಾಹವಿರುವುದೋ ಅಲ್ಲಿ ಎಂದೂ ಯಾವುದೇ ಪ್ರಕಾರದ ವಿಘ್ನವು ಉತ್ಸಾಹವುಳ್ಳ ಆತ್ಮನನ್ನು ಉತ್ಸಾಹದಿಂದ ದೂರಸರಿಸಲು ಸಾಧ್ಯವಿಲ್ಲ. ಹೇಗೆ ಅಲ್ಪಕಾಲದ ಉತ್ಸಾಹದಲ್ಲಿ ಎಲ್ಲಾ ಮಾತುಗಳು ಮರೆತು ಹೋಗುತ್ತವೆಯಲ್ಲವೆ. ಯಾವುದೇ ಉತ್ಸವವನ್ನು ಆಚರಿಸುತ್ತೀರೆಂದರೆ ಆ ಸಮಯದಲ್ಲಿ ಖುಷಿಯ ವಿನಃ ಮತ್ತೇನೂ ನೆನಪಿರುವುದಿಲ್ಲ. ಬ್ರಾಹ್ಮಣ ಜೀವನದಲ್ಲಿಯೂ ಪ್ರತೀ ಘಳಿಗೆ ಉತ್ಸವವಾಗಿದೆ ಅರ್ಥಾತ್ ಪ್ರತೀ ಘಳಿಗೆ ಉತ್ಸಾಹದಲ್ಲಿದ್ದೀರಿ ಅಂದಾಗ ಮತ್ತ್ಯಾವುದೇ ಮಾತುಗಳು ಬರುತ್ತವೆಯೇ? ಯಾವುದೇ ಹದ್ದಿನ ಉತ್ಸವಕ್ಕೆ ಹೋಗುತ್ತೀರೆಂದರೆ ಅಲ್ಲಿ ಏನಿರುತ್ತದೆ? ಕುಣಿಯುವುದು, ನರ್ತಿಸುವುದು, ತಿನ್ನುವುದು, ಆಟವಾಡುವುದು, ಇದೇ ಇರುತ್ತದೆಯಲ್ಲವೆ. ಅಂದಾಗ ಬ್ರಾಹ್ಮಣ ಜೀವನದ ಉತ್ಸವದಲ್ಲಿ ಇಡೀ ದಿನ ಏನು ಮಾಡುತ್ತೀರಿ? ಸೇವೆಯನ್ನೂ ಮಾಡುತ್ತೀರೆಂದರೂ ಅದು ಆಟವೆಂದು ತಿಳಿದು ಮಾಡುತ್ತೀರೋ ಅಥವಾ ಹೊರೆಯೆನಿಸುತ್ತದೆಯೋ? ಈಗಿನ ಪ್ರಪಂಚದಲ್ಲಿ ಯಾವುದೇ ಅಜ್ಞಾನಿ ಆತ್ಮಗಳು ಸ್ವಲ್ಪ ಬುದ್ಧಿಯಿಂದ ಕೆಲಸ ಮಾಡಿದರೂ ಸಹ ಬಹಳ ಸುಸ್ತಾಗಿದ್ದೇವೆ, ಬುದ್ಧಿಯಲ್ಲಿ ಕೆಲಸದ ಹೊರೆ ಬಹಳ ಇದೆ ಎಂದು ಹೇಳುತ್ತಾರೆ ಮತ್ತು ತಾವೂ ಸಹ ಸೇವೆ ಮಾಡಿ ಬರುತ್ತೀರಿ ಆದರೆ ತಾವೇನು ಹೇಳುತ್ತೀರಿ – ಸೇವೆಯ ಪ್ರತ್ಯಕ್ಷ ಫಲವನ್ನು ತಿಂದುಬಂದಿದ್ದೇವೆ ಎಂದು ಹೇಳುತ್ತೀರಿ ಏಕೆಂದರೆ ಎಷ್ಟು ದೊಡ್ಡದಕ್ಕಿಂತ ದೊಡ್ಡ ಸೇವೆಗೆ ನಿಮಿತ್ತರಾಗುತ್ತೀರೋ ಅಷ್ಟೇ ಸೇವೆಯ ಪ್ರತ್ಯಕ್ಷ ಫಲವು ಬಹಳ ದೊಡ್ಡದು ಮತ್ತು ಬಹಳ ಸುಂದರವಾದುದು ಸಿಗುತ್ತದೆ ಅಂದಮೇಲೆ ಪ್ರತ್ಯಕ್ಷ ಫಲವನ್ನು ಸೇವಿಸುವುದರಿಂದ ಇನ್ನೂ ಶಕ್ತಿ ಬಂದು ಬಿಡುತ್ತದೆಯಲ್ಲವೆ. ಖುಷಿಯ ಶಕ್ತಿಯು ಹೆಚ್ಚುತ್ತದೆ ಆದ್ದರಿಂದ ಭಲೆ ಶರೀರದ ಎಷ್ಟು ದೊಡ್ಡ ಕಠಿಣ ಕಾರ್ಯವೇ ಇರಬಹುದು ಅಥವಾ ಬುದ್ಧಿಯಿಂದ ಯೋಚಿಸುವ ಕಾರ್ಯವಿರಬಹುದು ಆದರೆ ತಮಗೆ ಸುಸ್ತಿನ ಅನುಭವಾಗುವುದಿಲ್ಲ. ಇದು ರಾತ್ರಿ ಅಥವಾ ಹಗಲು ಎಂಬುದೇ ಗೊತ್ತಾಗುವುದಿಲ್ಲ. ಒಂದುವೇಳೆ ಗಡಿಯಾರವು ತಮ್ಮ ಬಳಿ ಇರಲಿಲ್ಲವೆಂದರೆ ಎಷ್ಟು ಘಂಟೆಯಾಗಿದೆ ಎಂಬುದು ಅರ್ಥವಾಗುತ್ತಿರಲಿಲ್ಲ. ಉತ್ಸವವನ್ನು ಆಚರಿಸುತ್ತಿದ್ದೀರಿ ಆದ್ದರಿಂದ ಸೇವೆಯು ಉತ್ಸಾಹ ತರಿಸುತ್ತದೆ ಮತ್ತು ಉತ್ಸಾಹದ ಅನುಭವ ಮಾಡಿಸುತ್ತದೆ.

ಬ್ರಾಹ್ಮಣ ಜೀವನದಲ್ಲಿ ಒಂದು ಸೇವೆಯಾಗಿದೆ, ಇನ್ನೊಂದು ಏನಾಗುತ್ತದೆ? ಮಾಯೆ ಬರುತ್ತದೆ. ಮಾಯೆಯ ಹೆಸರನ್ನು ಕೇಳಿ ನಗುತ್ತೀರಿ ಏಕೆಂದರೆ ನಿಮಗೆ ತಿಳಿದಿದೆ – ಮಾಯೆಗೆ ನಮ್ಮೊಂದಿಗೆ ಬಹಳ ಪ್ರೀತಿಯಿದೆ, ಮಾಯೆಯ ಜೊತೆ ನಮಗೆ ಪ್ರೀತಿಯಿಲ್ಲ, ಮಾಯೆಗೆ ನಮ್ಮೊಂದಿಗೆ ಪ್ರೀತಿಯಿದೆ. ಉತ್ಸವದಲ್ಲಿ ಆಟವನ್ನೂ ನೋಡಲಾಗುತ್ತದೆ. ಇತ್ತೀಚೆಗೆ ಎಲ್ಲರಿಗೆ ಯಾವ ಆಟವು ಬಹಳ ಇಷ್ಟವಾಗುತ್ತದೆ? ಮಿಕ್ಕಿಮೌಸ್ನ ಆಟವನ್ನು ಬಹಳ ಆಡುತ್ತಾರೆ. ಜಾಹೀರಾತನ್ನೂ ಸಹ ಮಿಕ್ಕಿ ಮೌಸ್ನ ಆಟದಲ್ಲಿ ತೋರಿಸುತ್ತಾರೆ. ಭಲೆ ಮ್ಯಾಚ್ನ್ನು ಇಷ್ಟ ಪಡಬಹುದು ಅಥವಾ ಮಿಕ್ಕಿ ಮೌಸ್ನ ಆಟವನ್ನು ಇಷ್ಟ ಪಡಬಹುದು. ಇಲ್ಲಿಯೂ ಸಹ ಮಾಯೆಯು ಬರುತ್ತದೆಯೆಂದರೆ ಅದರೊಂದಿಗೆ ಮ್ಯಾಚ್ ಆಡಿ. ಚೆಂಡನ್ನು ಹೊಡೆಯಿರಿ, ಆಟದಲ್ಲಿ ಏನು ಮಾಡುತ್ತೀರಿ? ಚೆಂಡು ನಿಮ್ಮ ಮುಂದೆ ಬಂದಾಗ ನೀವು ಚೆಂಡನ್ನು ಇನ್ನೊಂದು ಕಡೆ ಎಸೆಯುತ್ತೀರಿ ಮತ್ತು ನೀವು ಕ್ಯಾಚ್ ಮಾಡುತ್ತೀರೆಂದರೆ ವಿಜಯಿಗಳಾಗಿ ಬಿಡುತ್ತೀರಿ ಹಾಗೆಯೇ ಇದು ಮಾಯೆಯ ಚೆಂಡಾಗಿದೆ – ಕೆಲವೊಮ್ಮೆ ‘ಕಾಮ’ದ ರೂಪದಲ್ಲಿ ಬರುತ್ತದೆ, ಕೆಲವೊಮ್ಮೆ ‘ಕ್ರೋಧ’ದ ರೂಪದಲ್ಲಿ ಬರುತ್ತದೆ. ಇದನ್ನು ಕ್ಯಾಚ್ ಮಾಡಿ, ಇದು ಮಾಯೆಯ ಆಟವಾಗಿದೆ. ಒಂದುವೇಳೆ ಮಾಯೆಯ ಆಟವನ್ನು ಆಟವೆಂದು ತಿಳಿದು ಮಾಡಿದರೆ ಉತ್ಸಾಹ ಹೆಚ್ಚುವುದು ಆದರೆ ಒಂದುವೇಳೆ ಮಾಯೆಯ ಯಾವುದೇ ಪರಿಸ್ಥಿತಿಯನ್ನು ಶತ್ರುವೆಂದು ತಿಳಿದು ನೋಡುತ್ತೀರೆಂದರೆ ಗಾಬರಿಯಾಗುತ್ತೀರಿ. ಮಿಕ್ಕಿ ಮೌಸ್ನ ಆಟದಲ್ಲಿಯೂ ಕೆಲವೊಮ್ಮೆ ಕೋತಿಯು ಬರುತ್ತದೆ, ಕೆಲವೊಮ್ಮೆ ನಾಯಿ, ಬೆಕ್ಕು, ಇನ್ನೂ ಕೆಲವೊಮ್ಮೆ ಇಲಿಯೂ ಬಂದು ಬಿಡುತ್ತದೆ ಆದರೆ ತಾವು ಗಾಬರಿಯಾಗುತ್ತೀರೇನು? ನೋಡಲು ಮಜಾ ಬರುತ್ತದೆಯಲ್ಲವೆ ಹಾಗೆಯೇ ಇದನ್ನೂ ಸಹ ಉತ್ಸವದ ರೂಪದಲ್ಲಿ ಮಾಯೆಯ ಭಿನ್ನ-ಭಿನ್ನ ಪರಿಸ್ಥಿತಿಗಳ ಆಟವನ್ನು ನೋಡುವುದರಲ್ಲಿ ಯಾರಾದರೂ ಗಾಬರಿಯಾಗಿ ಬಿಟ್ಟರೆ ಅವರಿಗೆ ಏನು ಹೇಳುವರು? ಆಟವನ್ನು ನೋಡುತ್ತಾ-ನೋಡುತ್ತಾ ಒಂದುವೇಳೆ ಚೆಂಡು ನನ್ನ ಬಳಿಯೇ ಬರುತ್ತಿದೆ, ಅದು ನನಗೆ ತಗುಲದಿರಲಿ ಎಂದು ಯೋಚಿಸಿದರೆ ಅವರು ಆಟವನ್ನು ನೋಡಲು ಸಾಧ್ಯವೇ? ಅಂದಾಗ ಖುಷಿ ಮತ್ತು ಆನಂದದಿಂದ ಆಟವನ್ನು ನೋಡಿ ಮಾಯೆಗೆ ಗಾಬರಿಯಾಗಬೇಡಿ. ಒಂದು ಮನೋರಂಜನೆಯೆಂದು ತಿಳಿಯಿರಿ. ಭಲೆ ಅದು ಹುಲಿಯ ರೂಪದಲ್ಲಾದರೂ ಬರಲಿ ಗಾಬರಿಯಾಗಬೇಡಿ, ಇದೇ ಸ್ಮೃತಿಯಿರಲಿ – ಬ್ರಾಹ್ಮಣ ಜೀವನದ ಪ್ರತೀ ಘಳಿಗೆ ಉತ್ಸವವಾಗಿದೆ, ಉತ್ಸಾಹವಾಗಿದೆ. ಅದರ ಮಧ್ಯದಲ್ಲಿ ಈ ಆಟವನ್ನೂ ನೋಡುತ್ತಿದ್ದೀರಿ, ಖುಷಿಯಲ್ಲಿ ನರ್ತಿಸುತ್ತಿದ್ದೀರಿ ಮತ್ತು ತಂದೆಯ ಬ್ರಾಹ್ಮಣ ಪರಿವಾರದ ವಿಶೇಷತೆಗಳ ಗುಣಗಳ ಗೀತೆಯನ್ನೂ ಹಾಡುತ್ತಿದ್ದೀರಿ ಮತ್ತು ಬ್ರಹ್ಮಾಭೋಜನವನ್ನೂ ಮಜವಾಗಿ ತಿನ್ನುತ್ತಿದ್ದೀರಿ.

ತಮ್ಮಂತಹ ಶುದ್ಧ ಭೋಜನ ನೆನಪಿನ ಭೋಜನವು ವಿಶ್ವದಲ್ಲಿ ಮತ್ತ್ಯಾರಿಗೂ ಪ್ರಾಪ್ತಿಯಾಗಿಲ್ಲ. ಈ ಭೋಜನಕ್ಕೆ ದುಃಖಭಂಜನ ಭೋಜನವೆಂದು ಹೇಳಲಾಗುತ್ತದೆ. ಈ ನೆನಪಿನ ಭೋಜನವು ಎಲ್ಲಾ ದುಃಖಗಳನ್ನು ದೂರ ಮಾಡಿ ಬಿಡುತ್ತದೆ ಏಕೆಂದರೆ ಶುದ್ಧ ಅನ್ನದಿಂದ ತನು ಮತ್ತು ಮನ ಎರಡೂ ಶುದ್ಧವಾಗಿ ಬಿಡುತ್ತದೆ. ಒಂದುವೇಳೆ ಅಶುದ್ಧ ಧನವು ಬಂದರೂ ಸಹ ಆ ಅಶುದ್ಧ ಧನವು ಖುಷಿಯನ್ನು ಹಾಳು ಮಾಡುತ್ತದೆ, ಚಿಂತೆಯನ್ನು ತರಿಸುತ್ತದೆ. ಎಷ್ಟು ಅಶುದ್ಧ ಹಣವು ಬರುವುದೋ ಅದು ಭಲೆ ಒಂದು ಲಕ್ಷ ರೂಪಾಯಿಯೇ ಬರಬಹುದು ಆದರೆ ಚಿಂತೆಯೂ ಪದುಮದಷ್ಟು ಬರುವುದು ಮತ್ತು ಚಿಂತೆಯನ್ನು ಸದಾ ಚಿತೆಯೆಂದು ಹೇಳಲಾಗುತ್ತದೆ ಅಂದಾಗ ಚಿತೆಯ ಮೇಲೆ ಕುಳಿತುಕೊಳ್ಳುವವರಿಗೆ ಖುಷಿಯಿರುವುದೇ! ಮತ್ತು ಶುದ್ಧ ಅನ್ನವು ಮನಸ್ಸನ್ನು ಶುದ್ಧ ಮಾಡಿ ಬಿಡುತ್ತದೆ ಆದ್ದರಿಂದ ಧನವೂ ಶುದ್ಧವಾಗಿ ಬಿಡುತ್ತದೆ. ನೆನಪಿನ ಆಹಾರದ ಮಹತ್ವಿಕೆಯಿದೆ, ಆದ್ದರಿಂದ ಬ್ರಹ್ಮಾಭೋಜನದ ಮಹಿಮೆಯಿದೆ. ಒಂದುವೇಳೆ ನೆನಪಿನಲ್ಲಿದ್ದು ತಯಾರಿಸುವುದಿಲ್ಲ ಮತ್ತು ಅಂತಹದ್ದನ್ನು ತಿನ್ನುತ್ತೀರೆಂದರೆ ಆ ಆಹಾರವು ಸ್ಥಿತಿಯನ್ನು ಏರುಪೇರು ಮಾಡಬಲ್ಲದು. ನೆನಪಿನಲ್ಲಿದ್ದು ತಯಾರಿಸಿದ ಮತ್ತು ನೆನಪಿನಲ್ಲಿದ್ದು ಸ್ವೀಕಾರ ಮಾಡುವವರ ಆಹಾರವು ಔಷಧಿಯ ಕೆಲಸವನ್ನೂ ಮಾಡುತ್ತದೆ ಮತ್ತು ಆಶೀರ್ವಾದದ ಕೆಲಸವನ್ನೂ ಮಾಡುತ್ತದೆ. ನೆನಪಿನ ಆಹಾರವು ಎಂದೂ ನಷ್ಟವನ್ನುಂಟು ಮಾಡುವುದಿಲ್ಲ. ಆದ್ದರಿಂದ ಪ್ರತೀಘಳಿಗೆ ಉತ್ಸವನ್ನು ಆಚರಿಸಿ. ಮಾಯೆಯು ಎಂತಹದ್ದೇ ರೂಪದಲ್ಲಿ ಬರಲಿ. ಮೋಹದ ರೂಪದಲ್ಲಿ ಬಂದರೂ ಸಹ ಅದು ಕೋತಿಯ ಆಟವನ್ನು ತೋರಿಸಲು ಬಂದಿದೆಯೆಂದು ತಿಳಿದುಕೊಳ್ಳಿ. ಆಟವನ್ನು ಸಾಕ್ಷಿಯಾಗಿ ನೋಡಿ. ಸ್ವಯಂ ಮಾಯೆಯ ಚಕ್ರದಲ್ಲಿ ಬಂದು ಬಿಡಬೇಡಿ. ಚಕ್ರದಲ್ಲಿ ಬರುತ್ತೀರೆಂದರೆ ಗಾಬರಿಯಾಗುತ್ತೀರಿ. ಇತ್ತೀಚೆಗೆ ಚಿಕ್ಕ-ಚಿಕ್ಕ ಮಕ್ಕಳಿಗೆ ಇಂತಹ ಮನೋರಂಜನೆಯ ಆಟ ಆಡಿಸುತ್ತಾರೆ. ಮೇಲೆ ಹತ್ತಿಸುತ್ತಾರೆ ಮತ್ತು ಕೆಳಗೆ ತಂದು ಬಿಡುತ್ತಾರೆ ಅಂದಾಗ ಇದೂ ಸಹ ಮನೋರಂಜನೆಯಾಗಿದೆ, ಆಟವಾಗಿದೆ. ಯಾವುದೇ ರೂಪದಲ್ಲಿ ಬರಲಿ, ಮಿಕ್ಕಿ ಮೌಸ್ನ ಆಟವನ್ನು ನೋಡಿ. ಯಾರು ಬರುವರೋ ಅವರು ಹೋಗುವರೂ ಕೂಡ ಆದ್ದರಿಂದ ಮಾಯೆಯು ಯಾವುದೇ ರೂಪದಲ್ಲಿ ಬಂದರೂ ಸಹ ಈಗೀಗ ಬಂದಿತು, ಈಗೀಗ ಹೋಯಿತು. ತಾವು ಮಾಯೆಯ ಜೊತೆ ಶ್ರೇಷ್ಠ ಸ್ಥಿತಿಯಿಂದ ಕೆಳಗಿಳಿದು ಬಿಡಬೇಡಿ. ಮಾಯೆಯು ಬಂದರೆ ಬರಲಿ ತಾವು ಅದರ ಜೊತೆ ಏಕೆ ಹೋಗುತ್ತೀರಿ! ಆಟದಲ್ಲಂತೂ ಇದು ಇದ್ದೇ ಇರುತ್ತದೆ. ಕೆಲವೊಂದು ಬರುತ್ತದೆ, ಕೆಲವು ಹೋಗುತ್ತದೆ, ಕೆಲವೊಂದು ಬದಲಾಗುತ್ತದೆ. ಒಂದುವೇಳೆ ದೃಶ್ಯ ಬದಲಾಗದಿದ್ದರೆ ಆಟವೇ ಪ್ರಿಯವೆನಿಸುವುದಿಲ್ಲ. ಮಾಯೆಯೂ ಸಹ ಯಾವುದೇ ರೂಪದಿಂದ ಬರಲಿ, ಯಾವುದೇ ದೃಶ್ಯವು ಬರುತ್ತದೆಯೆಂದರೆ ಅದು ಖಂಡಿತ ಬದಲಾಗುತ್ತದೆ. ಭಲೆ ದೃಶ್ಯವು ಬದಲಾಗುತ್ತಿರಲಿ ಆದರೆ ತಮ್ಮ ಶ್ರೇಷ್ಠ ಸ್ಥಿತಿಯು ಬದಲಾಗದಿರಲಿ. ಯಾವುದೇ ಆಟದಲ್ಲಿ ಯಾರಾದರೂ ಪಾತ್ರವನ್ನು ಅಭಿನಯಿಸುತ್ತಾರೆಂದರೆ ಅವರ ಜೊತೆ ತಾವೂ ಸಹ ಹಾಗೆಯೇ ಓಡತೊಡಗುತ್ತೀರಾ? ನೋಡುವವರು ಕೇವಲ ನೋಡುತ್ತಾ ಇರುತ್ತೀರಲ್ಲವೆ. ಅದೇರೀತಿ ಮಾಯೆಯೂ ಸಹ ಕೆಳಗಿಳಿಸಲು ಬರಲಿ ಅಥವಾ ಯಾವುದೇ ಸ್ವರೂಪದಲ್ಲಿ ಬರಲಿ ಆದರೆ ತಾವು ಅದರ ಆಟವನ್ನು ನೋಡಿ. ಅದು ಹೇಗಾದರೂ ಕೆಳಗೆ ಬೀಳಿಸಲು ಬಂದರೂ ಸಹ ನೀವು ಅದರ ರೂಪವನ್ನು ಗ್ರಹಿಸಿ ಅದನ್ನು ಆಟವೆಂದು ತಿಳಿದು ಆ ದೃಶ್ಯವನ್ನು ಸಾಕ್ಷಿಯಾಗಿದ್ದು ನೋಡಿ. ಮುಂದಿನದಕ್ಕಾಗಿ ಸ್ವಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳುವ ಶಿಕ್ಷಣವನ್ನು ಪಡೆದುಕೊಂಡು ಮುಂದುವರೆಯಿರಿ.

ಶಿವರಾತ್ರಿಯ ಉತ್ಸವ ಅರ್ಥಾತ್ ಉತ್ಸಾಹವನ್ನು ತರಿಸುವಂತಹ ಉತ್ಸವವಾಗಿದೆ. ಕೇವಲ ಇಂದಿನ ದಿನವಲ್ಲ, ತಮಗಾಗಿ ಸದಾ ಉತ್ಸವವಾಗಿದೆ ಮತ್ತು ಉತ್ಸಾಹವೂ ಜೊತೆಗಿದೆ. ಈ ಸ್ಲೋಗನ್ನ್ನು ಸದಾ ನೆನಪಿಟ್ಟುಕೊಳ್ಳಿ ಮತ್ತು ಅನುಭವ ಮಾಡುತ್ತಾ ಇರಿ. ಅದರ ವಿಧಿಯು ಕೇವಲ ಎರಡು ಶಬ್ಧಗಳದಾಗಿದೆ. ಸದಾ ಸಾಕ್ಷಿಯಾಗಿ ನೋಡಿ ಮತ್ತು ತಂದೆಯ ಸಾತಿ (ಜೊತೆಗಾರ) ಯಾಗಿ ಇರಿ. ಸದಾ ತಂದೆಯ ಸಾಥಿಯಾಗಿದ್ದರೆ ಎಲ್ಲಿ ತಂದೆಯಿರುವರೋ ಅಲ್ಲಿ ಸಾಕ್ಷಿಯಾಗಿ ನೋಡುವುದರಿಂದ ಸಹಜವಾಗಿ ಮಾಯಾಜೀತರಾಗಿ ಅನೇಕ ಜನ್ಮಗಳಿಗಾಗಿ ಜಗತ್ಜೀತರಾಗುವಿರಿ. ಅಂದಾಗ ಏನು ಮಾಡಬೇಕೆಂದು ತಿಳಿಯಿತೆ? ಸ್ವಯಂ ತಂದೆಯು ಪ್ರತಿಯೊಬ್ಬ ಮಗುವಿಗೆ ಜೊತೆ ಕೊಡುವುದಕ್ಕಾಗಿ ಸುವರ್ಣಾವಕಾಶವನ್ನೂ ಕೊಡುತ್ತಿದ್ದಾರೆ ಆದ್ದರಿಂದ ಸದಾ ಜೊತೆಯಿರಿ. ಹಾಗೆ ನೋಡಿದರೆ ಡಬಲ್ ವಿದೇಶಿಯರು ಒಂಟಿಯಾಗಿರಲು ಇಷ್ಟಪಡುತ್ತಾರೆ. ಅಲ್ಲಿ ಬಂಧನದಲ್ಲಿ ಬಂಧಿತರಾಗಬಾರದು, ಸ್ವತಂತ್ರರಾಗಿರಬೇಕೆಂದು ಅವರು ಜೊತೆಯಿರುವುದಿಲ್ಲ ಆದರೆ ಇವರ ಜೊತೆಯಲ್ಲಿ ಜೊತೆಯಿದ್ದರೂ ಸಹ ಸ್ವತಂತ್ರರಾಗಿರುತ್ತೀರಿ. ಬಂಧನದ ಅನುಭವವಾಗುವುದಿಲ್ಲ.

ಅಂದಾಗ ಇಂದಿನ ದಿನವು ಡಬಲ್ ಉತ್ಸವದ ದಿನವಾಗಿದೆ. ಹಾಗೆ ನೋಡಿದರೆ ಜೀವನವೂ ಉತ್ಸವವಾಗಿದೆ ಮತ್ತು ನೆನಪಾರ್ಥವೂ ಉತ್ಸವವಾಗಿದೆ. ಬಾಪ್ದಾದಾ ಎಲ್ಲಾ ವಿದೇಶದ ಮಕ್ಕಳನ್ನು ಸದಾ ನೆನಪು ಮಾಡುತ್ತಾರೆ ಮತ್ತು ಇಂದೂ ಸಹ ವಿಶೇಷವಾಗಿ ಶಿವ ಜಯಂತಿ ದಿನದ ನೆನಪನ್ನು ಕೊಡುತ್ತಿದ್ದಾರೆ ಏಕೆಂದರೆ ಯಾರೆಲ್ಲಾ ಎಲ್ಲಿಂದ ಬಂದಿರುವರೋ ಎಲ್ಲರ ನೆನಪಿನ ಪತ್ರಗಳು ತಂದಿರುತ್ತೀರಿ. ಕಾರ್ಡ್, ಪತ್ರ, ಟೋಲಿಗಳನ್ನು ತಂದಿದ್ದೀರಿ. ಯಾವ ಮಕ್ಕಳು ಹೃದಯದ ಉತ್ಸಾಹದ ನೆನಪು, ಪ್ರೀತಿ ಹಾಗೂ ಯಾವುದೇ ರೂಪದಿಂದ ತಮ್ಮ ನೆನಪಿನ ಚಿಹ್ನೆಗಳನ್ನು ಕಳುಹಿಸಿದ್ದೀರೋ ಆ ಎಲ್ಲಾ ಮಕ್ಕಳಿಗೆ ಬಾಪ್ದಾದಾರವರೂ ಸಹ ವಿಶೇಷವಾಗಿ ನೆನಪಿಗೆ ಮರುಪಾವತಿಯಾಗಿ ಪದುಮದಷ್ಟನ್ನು ಕೊಡುತ್ತಿದ್ದೇವೆ ಮತ್ತು ಬಾಪ್ದಾದಾ ನೋಡುತ್ತಿದ್ದೇವೆ – ಪ್ರತಿಯೊಬ್ಬ ಮಗುವಿನಲ್ಲಿ ಸೇವೆಯ ಮತ್ತು ಸದಾ ಮಾಯಾಜೀತರಾಗುವ ಉಲ್ಲಾಸ-ಉತ್ಸಾಹವು ಬಹಳ ಚೆನ್ನಾಗಿದೆ. ಪ್ರತಿಯೊಬ್ಬ ಮಗುವು ತಮ್ಮ ಶಕ್ತಿಗಿಂತಲೂ ಮೀರಿ ಸೇವೆಯಲ್ಲಿ ಮುಂದುವರೆಯುತ್ತಿದ್ದೀರಿ ಮತ್ತು ಮುಂದುವರೆಯುತ್ತಲೇ ಇರುತ್ತೀರಿ. ಉಳಿದಂತೆ ಯಾರು ಸತ್ಯ ಹೃದಯದಿಂದ ಹೃದಯದ ಸಮಾಚಾರವನ್ನು ತಂದೆಯ ಮುಂದಿಡುವರೋ ಅಂತಹವರ ಸತ್ಯ ಹೃದಯದ ಮೇಲೆ ತಂದೆಯು ಸದಾ ರಾಜಿಯಾಗುತ್ತಾರೆ ಆದ್ದರಿಂದ ಹೃದಯದ ಸಮಾಚಾರದಲ್ಲಿ ಏನೆಲ್ಲಾ ಚಿಕ್ಕ-ಚಿಕ್ಕ ಮಾತುಗಳು ಬಂದರೂ ಸಹ ಅವು ತಂದೆಯ ವಿಶೇಷ ನೆನಪಿನ ವರದಾನದಿಂದ ಸಮಾಪ್ತಿ ಆಗಿಯೇ ಬಿಡುತ್ತವೆ. ತಂದೆಯು ರಾಜಿಯಾಗುವುದು ಅರ್ಥಾತ್ ಸಹಜ ತಂದೆಯ ಸಹಯೋಗದಿಂದ ಮಾಯಾಜೀತರಾಗುವುದು ಆದ್ದರಿಂದ ಯಾವುದನ್ನು ತಂದೆಗೆ ಕೊಟ್ಟು ಬಿಟ್ಟಿರೋ ಅದು ಸಮಾಚಾರದ ರೂಪದಲ್ಲಿ ಇರಬಹುದು, ಪತ್ರ ಅಥವಾ ವಾರ್ತಾಲಾಪದ ರೂಪದಲ್ಲಿ ಇರಬಹುದು, ಯಾವಾಗ ತಂದೆಯ ಮುಂದೆ ಇಟ್ಟು ಬಿಟ್ಟಿರಿ, ಕೊಟ್ಟು ಬಿಟ್ಟಿರಿ ಅಂದಮೇಲೆ ಯಾವ ವಸ್ತುವನ್ನು ತಂದೆಗೆ ಕೊಡಲಾಗುತ್ತದೆಯೋ ಅದು ಮತ್ತೆ ತನ್ನದಾಗುವುದಿಲ್ಲ. ಅದು ಬೇರೆಯವರದಾಗಿ ಬಿಡುತ್ತದೆ. ಒಂದುವೇಳೆ ನಿರ್ಬಲತೆಯ ಸಂಕಲ್ಪವನ್ನೂ ಸಹ ತಂದೆಯ ಮುಂದೆ ಅರ್ಪಣೆ ಮಾಡಿದಿರೆಂದರೆ ಆ ನಿರ್ಬಲತೆಯು ತಮ್ಮದಲ್ಲ. ತಾವು ಕೊಟ್ಟು ಬಿಟ್ಟಿರಿ ಅದರಿಂದ ಮುಕ್ತರಾಗಿ ಬಿಟ್ಟಿರಿ ಆದ್ದರಿಂದ ಇದೇ ನೆನಪಿಟ್ಟುಕೊಳ್ಳಿ – ನಾನು ತಂದೆಯ ಮುಂದೆ ಇಟ್ಟೆನು ಅರ್ಥಾತ್ ಕೊಟ್ಟು ಬಿಟ್ಟೆನು. ಬಾಕಿ ವಿದೇಶದ ಉಲ್ಲಾಸ-ಉತ್ಸಾಹದ ಅಲೆಯು ಬಹಳ ಚೆನ್ನಾಗಿ ನಡೆಯುತ್ತಿದೆ. ಬಾಪ್ದಾದಾ ಮಕ್ಕಳನ್ನು ನಿರ್ವಿಘ್ನರಾಗುವ ಉಲ್ಲಾಸ ಮತ್ತು ಸೇವೆಯಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡುವ ಉಲ್ಲಾಸವನ್ನು ನೋಡಿ ಹರ್ಷಿತರಾಗುತ್ತೇವೆ. ಒಳ್ಳೆಯದು.

ಸದಾ ಅನಾದಿ ಮತ್ತು ಆದಿ ರಚನೆಯ ಆತ್ಮಿಕ ನಶೆಯಲ್ಲಿ ಇರುವವರು, ಸದಾ ಪ್ರತೀ ಘಳಿಗೆಯನ್ನು ಉತ್ಸವದ ಸಮಾನ ಆಚರಿಸುವವರು, ಸದಾ ನೆನಪು ಮತ್ತು ಸೇವೆಯ ಉತ್ಸಾಹದಲ್ಲಿ ಇರುವವರು, ಸದ ಮಾಯೆಯ ಪ್ರತೀ ಪರಿಸ್ಥಿತಿಯನ್ನು ಆಟವೆಂದು ತಿಳಿದು ಸಾಕ್ಷಿಯಾಗಿ ನೋಡುವವರು, ಸದಾ ತಂದೆಯ ಜೊತೆ ಪ್ರತೀ ಹೆಜ್ಜೆಯಲ್ಲಿ ಜೊತೆಗಾರರಾಗಿ ನಡೆಯುವಂತಹ ಸರ್ವ ಶ್ರೇಷ್ಠ ಬ್ರಾಹ್ಮಣ ಆತ್ಮರಿಗೆ, ಅಲೌಕಿಕ ಜನ್ಮದ ಶುಭಾಷಯಗಳ ಜೊತೆ ಜೊತೆಗೆ ನೆನಪು, ಪ್ರೀತಿ ಹಾಗೂ ನಮಸ್ತೆ.

ವರದಾನ:-

ಸರ್ವ ಆತ್ಮರು ನಮ್ಮ ಸಮಾನ ಆಸ್ತಿಯ ಅಧಿಕಾರಿಯಾಗಿ ಬಿಡಲಿ – ಹೀಗೆ ಯಾರು ಸದಾ ಇದೇ ಆತ್ಮಿಕ ಭಾವನೆಯಲ್ಲಿ ಇರುತ್ತಾರೆಯೋ ಅವರೇ ಮಾಸ್ಟರ್ ದಾತಾ ಆಗಿದ್ದಾರೆ. ಅಂತಹವರು ಯಾರಲ್ಲಿಯೂ ಕೊರತೆ, ಬಲಹೀನತೆಗಳನ್ನು ನೋಡದೆ, ಸ್ವಯಂ ಧಾರಣೆ ಮಾಡಿಕೊಂಡಿರುವ ಗುಣಗಳ-ಶಕ್ತಿಗಳ ಸಹಯೋಗವನ್ನು ಕೊಡುತ್ತಾರೆ. ಇವರಿರುವುದೇ ಹೀಗೆ ಎಂಬ ಭಾವನೆಗೆ ಬದಲು, ಇವರನ್ನೂ ನಾನು ತಂದೆಯ ಸಮಾನ ಮಾಡೋಣವೆಂಬ ಶುಭ ಭಾವನೆಯಿರಲಿ. ಜೊತೆ ಜೊತೆಗೆ ಈ ಶ್ರೇಷ್ಠ ಕಾಮನೆಯೇ ಇರಲಿ – ಈ ಎಲ್ಲಾ ಆತ್ಮರು ಬಡವ, ದುಃಖಿ, ಅಶಾಂತತೆಯಿಂದ ಸದಾ ಶಾಂತ, ಸುಖ-ರೂಪದವರಾಗಿ ಸಂಪನ್ನರಾಗಿ ಬಿಡಲಿ. ಹೀಗಿದ್ದಾಗಲೇ ಮಾಸ್ಟರ್ ದಾತಾ ಎಂದು ಹೇಳಲಾಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top