22 September 2021 KANNADA Murli Today | Brahma Kumaris

Read and Listen today’s Gyan Murli in Kannada

September 21, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಬೇಹದ್ದಿನ ಡ್ರಾಮಾದಲ್ಲಿ ನಾಯಕ-ನಾಯಕಿಯ ಪಾತ್ರ ನಿಮ್ಮದಾಗಿದೆ, ತಂದೆಯದಲ್ಲ, ಕೇವಲ ಪತಿತರನ್ನು ಪಾವನ ಮಾಡುವ ಕಲೆಯಿದೆ”

ಪ್ರಶ್ನೆ:: -

ಬ್ರಹ್ಮನ ಚಿತ್ರವನ್ನು ನೋಡಿ ಯಾರಿಗೆ ಬರುತ್ತದೆಯೋ ಅವರಿಗೆ ಯಾವ ರಹಸ್ಯವನ್ನು ತಿಳಿಸಬೇಕಾಗಿದೆ?

ಉತ್ತರ:-

ಅವರಿಗೆ ತಿಳಿಸಿ, ಇವರು ಆದಿ ಸೋ ಅಂತ್ಯದ ಆತ್ಮನಾಗಿದ್ದಾರೆ. ಯಾರು ಮೊದಲ ರಾಜಕುಮಾರ ಶ್ರೀಕೃಷ್ಣನಾಗಿದ್ದರೋ ಅವರದೇ ಅಂತಿಮ ಜನ್ಮದಲ್ಲಿ ತಂದೆಯು ಬರುತ್ತಾರೆ. ಇದು ಪತಿತ ಶರೀರವಾಗಿದೆ, ಇದೇ ಪಾವನವಾಗಬೇಕಾಗಿದೆ. ಇವರು ಭಗವಂತನಲ್ಲ, ಭಗವಂತನು ಸದಾ ಪಾವನವಾಗಿದ್ದಾರೆ, ಅವರು ಇವರ ತನುವಿನ ಆಧಾರವನ್ನು ತೆಗೆದುಕೊಂಡಿದ್ದಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಮುಖವನ್ನು ನೋಡಿಕೊ ಪ್ರಾಣಿ……

ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ – ಶಾಂತಿಗಾಗಿ ಹೊರಗೆ ಅಲೆದಾಡುವ ಅವಶ್ಯಕತೆಯಿಲ್ಲ. ಹೇಗೆ ಹಠಯೋಗಿ ಸನ್ಯಾಸಿಗಳು ತಿಳಿದುಕೊಳ್ಳುತ್ತಾರೆ – ಗೃಹಸ್ಥ ವ್ಯವಹಾರದಲ್ಲಿದ್ದರೆ ಶಾಂತಿ ಸಿಗಲು ಸಾಧ್ಯವಿಲ್ಲ, ಶಾಂತಿಯು ಕಾಡಿನಲ್ಲಿ ಸಿಗುತ್ತದೆ ಎಂದು. ಆದರೆ ತಂದೆಯು ತಿಳಿಸುತ್ತಾರೆ – ಶಾಂತಿಯು ಅಲ್ಲಿಯೂ ಸಿಗಲು ಸಾಧ್ಯವಿಲ್ಲ, ಇದರ ಮೇಲೆ ಒಂದು ಕಥೆಯನ್ನೂ ತಿಳಿಸುತ್ತಾರೆ – ರಾಣಿಯ ಕೊರಳಿನಲ್ಲಿಯೇ ಹಾರವಿತ್ತು, ಆದರೆ ಅದಕ್ಕಾಗಿ ಹೊರಗಡೆ ಹುಡುಕಾಡುತ್ತಿದ್ದಳು…. ಹಾಗೆಯೇ ಶಾಂತಿಯು ನಿಮ್ಮ ಕೊರಳಿನಲ್ಲಿದೆ. ಹೊರಗಡೆ ಎಲ್ಲಿ ಹುಡುಕುತ್ತೀರಿ? ತಂದೆಯು ಬಂದು ತಿಳಿಸುತ್ತಾರೆ – ಮಕ್ಕಳೇ, ನೀವಾತ್ಮರ ಸ್ವಧರ್ಮವೇ ಶಾಂತಿಯಾಗಿದೆ. ಈ ಶರೀರವು ನಿಮ್ಮ ಕರ್ಮೇಂದ್ರಿಯವಾಗಿದೆ. ಇದರಿಂದ ನೀವು ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಆತ್ಮವಂತೂ ಅವಿನಾಶಿಯಾಗಿದೆ, ಆತ್ಮದ ಗಾತ್ರವು ಚಿಕ್ಕದು-ದೊಡ್ಡದು ಆಗುವುದಿಲ್ಲ, ವಿನಾಶವೂ ಹೊಂದುವುದಿಲ್ಲ. ಹಾ! ಆತ್ಮವು ಪತಿತನಾಗುತ್ತದೆ, ಇದೇ ಪಾವನವಾಗಬೇಕಾಗುತ್ತದೆ. ಆತ್ಮಕ್ಕೆ ಮೊದಲು ಶಿಶುವಿನ ಶರೀರ ಸಿಗುತ್ತದೆ ನಂತರ ಯುವ…. ಬುದ್ಧಿಯಾಗುತ್ತದೆ. ಆತ್ಮವಂತೂ ಏಕರಸವಾಗಿದೆ, ಮೊಟ್ಟ ಮೊದಲು ಆತ್ಮನನ್ನು ಅರಿಯಬೇಕಾಗಿದೆ. ನಾನಾತ್ಮನೇ ವಕೀಲನಾಗುತ್ತೇನೆ, ಇದಕ್ಕೇ ಆತ್ಮಾಭಿಮಾನಿ ಭವ ಎಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ದೇಹಾಭಿಮಾನಿ ಆಗಿ ಬಿಟ್ಟಿದ್ದೀರಿ ಆದ್ದರಿಂದ ತಮ್ಮನ್ನು ಶರೀರವೆಂದು ತಿಳಿದುಕೊಳ್ಳುತ್ತೀರಿ. ನಾನಾತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ ಎಂಬುದನ್ನು ಮರೆತು ಹೋಗುತ್ತೀರಿ. ಆದ್ದರಿಂದ ತಮ್ಮನ್ನು ಆತ್ಮಾನುಭೂತಿ ಮಾಡಿಕೊಳ್ಳಬೇಕಾಗಿದೆ. ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ಈಗ ತಂದೆಯು ತಿಳಿಸಿದ್ದಾರೆ – ಯಾರು ಬ್ರಾಹ್ಮಣರಾಗಿದ್ದಾರೆಯೋ ಅವರೇ ಮತ್ತೆ ದೇವತೆಗಳಾಗುತ್ತಾರೆ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಕೆಲವರು ಮೊದಲು ಬರುತ್ತಾರೆ, ಕೆಲವರು 50-100 ವರ್ಷಗಳ ನಂತರವೂ ಬರುತ್ತಾರೆ. ಕೆಲವರದು 80, ಕೆಲವರದು 82 ಜನ್ಮಗಳಿರುತ್ತವೆ. ಮನುಷ್ಯರು 84 ಲಕ್ಷ ಜನ್ಮಗಳೆಂದು ಹೇಳುತ್ತಾರೆ. ಇದರಿಂದಲೂ ಸಂತುಷ್ಟತೆ ಆಗಲಿಲ್ಲವೆಂದರೆ ಕಣ-ಕಣದಲ್ಲಿ ಭಗವಂತನಿದ್ದಾರೆಂದು ಹೇಳುತ್ತಾರೆ. ಈಗ ಭಗವಂತನು ತಿಳಿಸುವುದೇನೆಂದರೆ ನಾನು ಯಾವುದೇ ಮನುಷ್ಯ ತನುವಿನಲ್ಲಿಯೂ ಇಲ್ಲ ಅಂದಮೇಲೆ ಕಲ್ಲು-ಮುಳ್ಳು, ಪ್ರಾಣಿ-ಪಕ್ಷಿ, ಕಣ-ಕಣದಲ್ಲಿ ಹೇಗೆ ಇರುವೆನು! ತಂದೆಯು ತಿಳಿಸಿದ್ದಾರೆ – ನಂಬರ್ವನ್ ಆತ್ಮರೇ ಕೊನೆಯಲ್ಲಿ ತಮೋಪ್ರಧಾನರಾಗುತ್ತಾರೆ. ನಾನು ಬಹಳ ಜನ್ಮಗಳ ಅಂತಿಮದಲ್ಲಿ ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರು ಅವಶ್ಯವಾಗಿ ಪತಿತರಾಗಿರುವರು. ಪಾವನರಂತೂ ಆಗಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ – ಮೊದಲ ನಂಬರಿನಲ್ಲಿ ಶ್ರೀಕೃಷ್ಣನಿದ್ದಾನೆ, ಮೊದಲ ರಾಜಕುಮಾರನಾಗಿದ್ದಾನೆ. ದೊಡ್ಡವನಾದ ಮೇಲೆ ಶ್ರೀನಾರಾಯಣ ಆಗುತ್ತಾರೆ. ಅಷ್ಟು ಸಮಯಕ್ಕೆ 20-25 ವರ್ಷಗಳು ಕಡಿಮೆಯಾಗಿ ಬಿಡುತ್ತದೆ. ಅವರದೂ ಪೂರ್ಣ 84 ಜನ್ಮಗಳೆಂದು ಹೇಳುವುದಿಲ್ಲ. ನಂಬರ್ವನ್ ಶ್ರೀಕೃಷ್ಣನಾಗಿದ್ದಾನೆ. ಭಲೆ ಅವರೇ ಸ್ವಯಂವರದ ನಂತರ ನಾರಾಯಣನಾಗುತ್ತಾರೆ ಆದರೆ ಮಕ್ಕಳಿಂದಲೇ ಲೆಕ್ಕ ಮಾಡಲಾಗುತ್ತದೆಯಲ್ಲವೆ ಅಂದಮೇಲೆ ಶ್ರೀಕೃಷ್ಣನದೇ ಪೂರ್ಣ 84 ಜನ್ಮ ಅಥವಾ 5000 ವರ್ಷಗಳೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ನಾನು ಕಲ್ಪ-ಕಲ್ಪವೂ ಅದೇ ತನುವಿನಲ್ಲಿ ಬರುತ್ತೇನೆ ಯಾರದು ಆದಿಯಿಂದ ಹಿಡಿದು ಅಂತ್ಯದವರೆಗೆ ಪಾತ್ರವಿದೆ ಮತ್ತ್ಯಾರಲ್ಲಿಯೂ ಬರುವುದಿಲ್ಲ. ಲೆಕ್ಕವಿದೆಯಲ್ಲವೆ. ಬ್ರಹ್ಮನೇ ಮೊದಲ ನಂಬರಿನವರಾದರು, ನಾನು ಮತ್ತ್ಯಾರಲ್ಲಿಯೂ ಬರಲು ಸಾಧ್ಯವಿಲ್ಲ. ನಿಮ್ಮನ್ನು ಅನೇಕರು ಕೇಳುತ್ತಾರೆ – ಕೇವಲ ಒಬ್ಬ ಬ್ರಹ್ಮಾರವರಲ್ಲಿಯೇ ಭಗವಂತನು ಏಕೆ ಬರುತ್ತಾರೆ ಎಂದು. ಆದರೆ ಇದು ಲೆಕ್ಕವಿದೆಯಲ್ಲವೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ. ವಿಷ್ಣು ಅಥವಾ ಶಂಕರನ ಮೂಲಕ ಸ್ಥಾಪನೆ ಮಾಡುವುದಿಲ್ಲ, ಇದು ಮತ್ತ್ಯಾರ ಕರ್ತವ್ಯವೂ ಅಲ್ಲ. ಮನುಷ್ಯರು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ. ಇನ್ನ್ಯಾವ ಮಾತಿಗೆ ಚಿಂತೆ ಮಾಡಬೇಕು…. ಇದು ಈಗಿನ ಮಾತಾಗಿದೆ. ಏನಾಗಬೇಕಾಗಿದೆಯೋ ಅದೇ ಆಗುತ್ತದೆ. ಅದು ಬದಲಾಗಲು ಸಾಧ್ಯವಿಲ್ಲ. ಇಂದು ಏನೆಲ್ಲವೂ ಆಗುತ್ತದೆಯೋ ಮತ್ತೆ ಅದು 5000 ವರ್ಷಗಳ ನಂತರ ಆಗುವುದು. ತಂದೆಯು ಇದನ್ನೂ ತಿಳಿಸಿದ್ದರು, ಯಾವುದೇ ಅಂತಹ ಮಾತನ್ನು ಈ ರೀತಿ ನೋಡಿದರೆ ಹೇಳಿರಿ, ಇದೇನೂ ಹೊಸ ಮಾತಲ್ಲ. 5000 ವರ್ಷಗಳ ಮೊದಲೂ ಆಗಿತ್ತು. ಇದೇ ರೀತಿ ಬರೆಯಿರಿ, ಮತ್ತೆ ಅವರು ಬಂದು ಕೇಳಿದರೆ ಕೇಳಬಹುದು, ಬರೆಯುವುದರಲ್ಲಿ ಯಾವುದೇ ಮಾತಿಲ್ಲ. ಈ ಯುದ್ಧವು ಮೊದಲೂ ಆಗಿತ್ತು, ನತಿಂಗ್ನ್ಯೂ. 5000 ವರ್ಷಗಳ ಮೊದಲೂ ಸಹ ಮಹಾಭಾರತ ಯುದ್ಧವಾಗಿತ್ತು, ಕ್ರಿಶ್ಚಿಯನ್ನರು ಭಾರತದಲ್ಲಿ ಬಂದು ರಾಜ್ಯವನ್ನು ಕಸಿದುಕೊಂಡರು, ನತಿಂಗ್ನ್ಯೂ. ಮತ್ತೆ ಕಲ್ಪದ ನಂತರವೂ ಇದೇರೀತಿ ಆಗುವುದು. ಈ ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತಾ ಇರುತ್ತದೆ. ಈಗ ಪುನಃ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ. ಯಾರದು 84 ಜನ್ಮಗಳು ಪೂರ್ಣವಾಗಿದೆಯೋ ಅವರೇ ಪುನಃ ಮೊಟ್ಟ ಮೊದಲಿಗೆ ಲಕ್ಷ್ಮೀ-ನಾರಾಯಣರಾಗುತ್ತಾರೆ. ಇದೆಲ್ಲಾ ರಹಸ್ಯವನ್ನು ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಹೇಳುತ್ತಾರೆ – ನಾನು ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದೇನೆ, ಇದಕ್ಕೆ ಉಲ್ಟಾ ವೃಕ್ಷವೆಂದು ಹೇಳಲಾಗುತ್ತದೆ. ಈ ಕಲ್ಪವೃಕ್ಷದ ಆಯಸ್ಸು 5000 ವರ್ಷಗಳಾಗಿದೆ. ಸ್ವಸ್ತಿಕದಲ್ಲಿ ನಾಲ್ಕೂ ಭಾಗಗಳನ್ನು ಒಂದೇ ಸಮನಾಗಿ ತೋರಿಸುತ್ತಾರೆ. ಯುಗಗಳೂ ಸಮನಾಗಿವೆ, ಅದರಲ್ಲಿ ಅಂತರವಾಗಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ – ನೋಡಿ, ಪ್ರಪಂಚದಲ್ಲಿ ಏನೇನಾಗುತ್ತಿದೆ! ಕೆಲವರು ಚಂದ್ರ ಗ್ರಹಕ್ಕೆ ಹೋಗುತ್ತಾರೆ, ಕೆಲವು ಬೆಂಕಿಯಲ್ಲಿ, ಕೆಲವರು ನೀರಿನಲ್ಲಿ ನಡೆಯುವುದನ್ನು ಕಲಿಯುತ್ತಾರೆ. ಇದೆಲ್ಲವೂ ವ್ಯರ್ಥವಾಗಿದೆ, ಇದರಿಂದೇನೂ ಲಾಭವಿಲ್ಲ. ಮನುಷ್ಯರು ಪಾವನರಾಗಿ ಮುಕ್ತಿ-ಜೀವನ್ಮುಕ್ತಿಯಲ್ಲಂತೂ ಹೋಗಲು ಸಾಧ್ಯವಿಲ್ಲ. ಏನಾದರೂ ಮಾಡಲಿ ಆದರೆ ಹಿಂತಿರುಗಿ ಮನೆಗೆ ಹೋಗಲು ಸಾಧ್ಯವಿಲ್ಲ. ಆತ್ಮಕ್ಕೆ ತನ್ನ ಮನೆ ಮತ್ತು ತಂದೆಯ ಮನೆ ಮರೆತು ಹೋಗಿದೆ. ಆತ್ಮವು ತನ್ನನ್ನೇ ಮರೆತು ದೇಹಾಭಿಮಾನಿ ಆಗಿ ಬಿಟ್ಟಿದೆ ಮತ್ತೆ ಮಂದಿರಗಳಲ್ಲಿ ಹೋಗಿ ಮಹಿಮೆ ಮಾಡುತ್ತಾರೆ – ತಾವು ಸರ್ವಗುಣ ಸಂಪನ್ನರು, ನಾವು ನೀಚ ಪಾಪಿ ಆಗಿದ್ದೇವೆ ಎಂದು ತಮ್ಮ ನಿಂದನೆ ಮಾಡಿಕೊಳ್ಳುತ್ತಾರೆ. ತಂದೆಯಂತೂ ಎಂದೂ ಪೂಜಾರಿಯಾಗುವುದಿಲ್ಲ. ಮತ್ತೆ ಎರಡನೇ ನಂಬರಿನಲ್ಲಿ ಶಂಕರನು ಸದಾ ಪೂಜ್ಯ ಎಂದು ಹೇಳಬಹುದು ಏಕೆಂದರೆ ಶಂಕರನು ಪೂಜಾರಿಯಾಗುವುದಿಲ್ಲ ಏಕೆಂದರೆ ಅವರ ಪಾತ್ರವೇ ಇಲ್ಲಿ ಇಲ್ಲ. ಈ ಸ್ಟೇಜಿನ ಮೇಲೆ ಬ್ರಹ್ಮಾ ಮತ್ತು ವಿಷ್ಣುವಿನ ಪಾತ್ರವಿದೆ. ಬ್ರಹ್ಮಾ ಮತ್ತು ವಿಷ್ಣುವಿನದು ಯಾವ ಪಾತ್ರವಿದೆ ಎಂಬುದು ಈ ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ತ್ರಿಮೂರ್ತಿ ಬ್ರಹ್ಮನೆಂದೂ ಹೇಳುತ್ತಾರೆ, ಅರ್ಥವನ್ನು ತಿಳಿದುಕೊಂಡಿಲ್ಲ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಹಾಡುತ್ತಾರೆ, ಯಾರು ಮಾಡುತ್ತಾರೆಯೋ ಅವರ ಚಿತ್ರವೇ ಇಲ್ಲ. ಬಾಯಿಂದ ಹೇಳುತ್ತಾರೆ ಆದರೆ ಅವರು ಎಲ್ಲಿದ್ದಾರೆ? ಶಿವನೆಂದರೆ ಯಾರು? ಎಂಬುದೇ ತಿಳಿದುಕೊಂಡಿಲ್ಲ. ಆತ್ಮಕ್ಕಾಗಿ ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ. ನಾನಾತ್ಮ ಅವಿನಾಶಿಯಾಗಿದ್ದೇನೆ, ಶರೀರವು ವಿನಾಶಿಯಾಗಿದೆ. ಎಷ್ಟು ಶರೀರಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನೂ ತಿಳಿದುಕೊಂಡಿಲ್ಲ. ಮನುಷ್ಯರು ಎಷ್ಟೊಂದು ದುಃಖಿಯಾಗಿದ್ದಾರೆ! ಹೇ ಪರಮಪಿತ ಪರಮಾತ್ಮನೇ ಎಂದು ಕೂಗುತ್ತಿರುತ್ತಾರೆ. ದುಃಖವು ಆರಂಭವಾದಾಗಿನಿಂದಲೂ ಕೂಗುತ್ತಲೇ ಬಂದಿದ್ದಾರೆ. ಇದನ್ನೂ ತಿಳಿಸಲಾಗಿದೆ – ಭಾರತದಲ್ಲಿ ರಾವಣ ರಾಜ್ಯವು ಆರಂಭವಾದಾಗ ಅನ್ಯ ಧರ್ಮಗಳಲ್ಲಿಯೂ ರಾವಣ ರಾಜ್ಯವಾಯಿತು ಎಂದಲ್ಲ, ಅವರು ತಮ್ಮ ಸಮಯದಲ್ಲಿ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಈ ಕಥೆಯೆಲ್ಲವೂ ಭಾರತದ ಮೇಲಿದೆ, ಅವರೆಲ್ಲರೂ ಶಾಖೆಗಳಾಗಿದ್ದಾರೆ. ತಂದೆಯು ಮಧ್ಯದಲ್ಲಿಯೇ ಬರುತ್ತಾರೆ. ಭಾರತವು ಯಾವಾಗ ತಮೋಪ್ರಧಾನ ಆಗಿ ಬಿಡುತ್ತದೆಯೋ ಆಗ ಇಡೀ ವೃಕ್ಷವು ತಮೋಪ್ರಧಾನವಾಗುತ್ತದೆ, ಅವರೂ ಸಹ ಸುಖ-ದುಃಖವನ್ನು ಅನುಭವಿಸಬೇಕಾಗಿದೆ. ವೃಕ್ಷದಲ್ಲಿ ಹೊಸ-ಹೊಸ ಎಲೆಗಳು ಬರುತ್ತವೆ, ಅವು ಬಹಳ ಶೋಭಾಯಮಾನವಾಗಿರುತ್ತವೆ. ಹೊಸ ಆತ್ಮರು ಮತ್ತೆ ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರಬೇಕಾಗಿದೆ. ಯಾರು ಕೊನೆಯಲ್ಲಿ ಬರುವರೋ ಅವರಿಗೆ ಸ್ವಲ್ಪ ಮಾನ್ಯತೆಯಿರುತ್ತದೆ. ಒಂದು ಜನ್ಮದಲ್ಲಿಯೂ ಸತೋ, ರಜೋ, ತಮೋ ಮೂರೂ ಹಂತಗಳನ್ನು ಪಾರು ಮಾಡುತ್ತಾರೆ ಆದರೆ ಅವರಿಗೇನೂ ಬೆಲೆಯಿರುವುದಿಲ್ಲ. ಯಾರು ಹೀರೋ-ಹೀರೋಯಿನ್ ಪಾತ್ರವನ್ನು ಅಭಿನಯಿಸುವರೋ ಅವರಿಗೆ ಬೆಲೆಯಿದೆ. ತಂದೆಯೇ ನಾಯಕ-ನಾಯಕಿಯ ಪಾತ್ರವನ್ನು ಅಭಿನಯಿಸುತ್ತಾರೆ ಎಂದಲ್ಲ. ತಂದೆಗೆ ಈ ರೀತಿ ಹೇಳುವುದಿಲ್ಲ, ಅವರು ಬಂದು ಪತಿತರನ್ನು ಪಾವನ ಮಾಡುತ್ತಾರೆ. ತಾನು ಪತಿತನಾಗುವುದಿಲ್ಲ. ನೀವು ಪತಿತರಿಂದ ಪಾವನರಾಗುವ ಪರಿಶ್ರಮ ಪಡುತ್ತೀರಿ, ಶ್ರೀಮತದಂತೆ ರಾಜಯೋಗದಿಂದಲೇ ರಾಜ್ಯವನ್ನು ಪಡೆದಿದ್ದಿರಿ, ಈಗ ಪುನಃ ಪಡೆಯುತ್ತಿದ್ದೀರಿ. ತಂದೆಯು ಹೇಳುತ್ತಾರೆ – ನಾನು ರಾಜ್ಯಭಾರ ಮಾಡುವುದಿಲ್ಲ, ನಿಮ್ಮನ್ನು ರಾಜಾಧಿ ರಾಜರನ್ನಾಗಿ ಮಾಡುತ್ತೇನೆ. ಈಗ ಪ್ರಪಂಚದಲ್ಲಿ ಮನುಷ್ಯರು ಬಹಳಷ್ಟು ಹೇಳುತ್ತಾರೆ, ಭಗವಾನುವಾಚ – ನಾನು ನಿಮ್ಮನ್ನು ರಾಜಾಧಿ ರಾಜರನ್ನಾಗಿ ಮಾಡುತ್ತೇನೆ, ಅದರ ಅರ್ಥವನ್ನು ತಾನೂ ತಿಳಿದುಕೊಂಡಿರುವುದಿಲ್ಲ, ಅನ್ಯರಿಗೂ ತಿಳಿಸುವುದಿಲ್ಲ. ಭಗವಾನುವಾಚ ಇದೆಯೆಂದಮೇಲೆ ಅವಶ್ಯವಾಗಿ ಭಗವಂತನು ಬಂದಿದ್ದರು ಆದ್ದರಿಂದಲೇ ಹೇಳಿರಬೇಕಲ್ಲವೆ – ಹೇ ಮಕ್ಕಳೇ, ಭಾರತದಲ್ಲಿಯೇ ಶಿವ ಜಯಂತಿ, ಶಿವ ರಾತ್ರಿಯನ್ನು ಆಚರಣೆ ಮಾಡುತ್ತಾರೆ. ತಂದೆಯು ಭಾರತ ಖಂಡದಲ್ಲಿಯೇ ಬರುತ್ತಾರೆ, ಭಾರತವೇ ಅವಿನಾಶಿ ಖಂಡವಾಗಿದೆ. ಅದರ ಮಹಿಮೆಯು ಬಹಳ ಭಾರಿಯಾಗಿದೆ. ಹೇಗೆ ತಂದೆಯ ಮಹಿಮೆಯು ಅಪರಮಪಾರವಾಗಿದೆಯೋ ಹಾಗೆಯೇ ಭಾರತದ ಮಹಿಮೆಯೂ ಅಪರಮಪಾರವಾಗಿದೆ. ಭಾರತದಲ್ಲಿಯೇ ಪರಮಪಿತ ಪರಮಾತ್ಮನು ಬಂದು ಎಲ್ಲಾ ಮನುಷ್ಯ ಮಾತ್ರರ ಸದ್ಗತಿ ಮಾಡುತ್ತಾರೆ, ಎಲ್ಲರಿಗೆ ಸುಖ ಕೊಡುತ್ತಾರೆ. ಅವರ ಜನ್ಮ ಸ್ಥಾನವು ಭಾರತವಾಗಿದೆ. ಭಾರತವೇ ಪ್ರಾಚೀನ ದೇಶವಾಗಿದೆ. ಭಗವಂತನು ರಾಜಯೋಗವನ್ನು ಕಲಿಸಲು ಭಾರತದಲ್ಲಿಯೇ ಬಂದಿದ್ದರು ಆದರೆ ಕೃಷ್ಣನಿಗೆ ಭಗವಂತನೆಂದು ಹೇಳಿರುವ ಕಾರಣ ಇವರಿಗೆ ಅಷ್ಟು ಮಹಿಮೆಯಿಲ್ಲ, ಭಗವಂತನು ಒಬ್ಬರೇ ಆಗಿದ್ದಾರೆ, ಅವರಿಗೇ ಸದ್ಗುರುವೆಂದು ಹೇಳಲಾಗುತ್ತದೆ. ಬಾಕಿ ಗುರುಗಳು ಅನೇಕರಿದ್ದಾರೆ, ಯಾವುದೇ ಉದ್ಯೋಗವನ್ನು ಕಲಿಸಿದರೂ ಸಹ ಅವರಿಗೆ ಗುರುವೆಂದು ಹೇಳುತ್ತಾರೆ. ಇತ್ತೀಚೆಗೆ ಎಲ್ಲರನ್ನೂ ಅವತಾರವೆಂದು ನಂಬುತ್ತಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾವಾಗ ಸಂಪೂರ್ಣ ಪತಿತರಾಗುವರೋ ಆಗ ಬಾಬಾ, ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ.

ತಂದೆಯೇ ಬಂದು ಸತ್ಯ-ಸತ್ಯವಾದ ಅಮರ ಕಥೆಯನ್ನು ತಿಳಿಸುತ್ತಾರೆ. ನಾವು ಹೇಗೆ 84 ಜನ್ಮಗಳಲ್ಲಿ ಬರುತ್ತೇವೆ, ಮೊದಲು ಒಳ್ಳೆಯ ಜನ್ಮ ಮತ್ತೆ ಇಳಿಯುತ್ತಾ ಬರುತ್ತೇವೆ. ಹಾಗೆಯೇ ಪ್ರಪಂಚವು ಇಳಿಯುವ ಕಲೆಯಾಗುತ್ತದೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಮನುಷ್ಯರ ಬುದ್ಧಿಯು ಸತೋ, ರಜೋ, ತಮೋ ಆಗುತ್ತದೆ. ಸತ್ಯಯುಗದಿಂದ ನಂತರ ಸ್ವಲ್ಪ-ಸ್ವಲ್ಪವಾಗಿಯೇ ಇಳಿಯುವ ಕಲೆಯು ಆರಂಭವಾಗುತ್ತದೆ. ಏರುವ ಕಲೆಯಿಂದ ಸರ್ವರ ಉದ್ಧಾರವಾಗುವುದು. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರಲ್ಲವೆ. ಆ ಗುರುಗಳು ಕೇವಲ ಶಾಸ್ತ್ರಗಳನ್ನು ತಿಳಿಸುತ್ತಾರೆ. ಕೇಳುತ್ತಾ-ಕೇಳುತ್ತಾ ಇಳಿಯುತ್ತಲೇ ಬಂದಿದ್ದಾರೆ. ಬೇಹದ್ದಿನ ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ – ನಾನು ನಿಮ್ಮನ್ನು ಇಷ್ಟು ಸಾಹುಕಾರರನ್ನಾಗಿ ಮಾಡಿ ಹೋದೆನು, ಇಷ್ಟು ವಜ್ರ-ವೈಡೂರ್ಯಗಳ ಮಹಲುಗಳನ್ನು ಕೊಟ್ಟು ಹೋದೆನು, ಅದೆಲ್ಲವೂ ಎಲ್ಲಿ ಹೋಯಿತು? ಲೌಕಿಕ ತಂದೆಯು ಮಕ್ಕಳಿಗೆ ಹಣವನ್ನು ಕೊಡುತ್ತಾರೆ ಆದರೆ ಮಕ್ಕಳು ಹಣವನ್ನು ಹಾಳು ಮಾಡಿದರೆ ತಂದೆಯು ಕರೆಸಿ ಕೇಳುತ್ತಾರೆ – ನೀವು ಇಷ್ಟೊಂದು ಹಣವನ್ನು ಎಲ್ಲಿ ಕಳೆದಿರಿ ಎಂದು. ಮಕ್ಕಳ ಬಳಿ ಹಣವಿದ್ದರೆ ಎಲ್ಲವನ್ನೂ ಉಡಾಯಿಸಿ ಬಿಡುತ್ತಾರೆ, ತಂದೆಯು ಧರ್ಮಾತ್ಮನಾಗಿರುತ್ತಾರೆ ಮಕ್ಕಳು ವಿದೇಶಕ್ಕೆ ಹೋಗಿ ಲಕ್ಷಾಂತರ ರೂಪಾಯಿಗಳನ್ನು ಉಡಾಯಿಸಿ ಬರುತ್ತಾರೆ. ತಂದೆಯು ಏನೂ ಮಾಡಲು ಆಗುವುದಿಲ್ಲ. ತಂದೆಯು ವಿಚ್ಛೇದನವನ್ನೂ ಕೊಡುವಂತಿಲ್ಲ ಏಕೆಂದರೆ ಅದು ತಾತನ ಆಸ್ತಿಯಾಗಿರುತ್ತದೆ. ಒಳಗಿಂದೊಳಗೆ ಕೊರಗುತ್ತಿರುತ್ತಾರೆ. ತಂದೆಯು ಸತ್ತ ನಂತರ ಕೆಲಕೆಲವರಂತೂ ಇಂತಹ ಕೆಟ್ಟ ಮಕ್ಕಳಿರುತ್ತಾರೆ, 12 ತಿಂಗಳಿನಲ್ಲಿಯೇ ಎಲ್ಲಾ ಸಂಪತ್ತನ್ನು ಹಾರಿಸಿ ಬಿಡುತ್ತಾರೆ. ಅವಂತೂ ಹದ್ದಿನ ಮಾತುಗಳಾಗಿವೆ, ಇದು ಬೇಹದ್ದಿನ ಮಾತಾಗಿದೆ. ಬೇಹದ್ದಿನ ತಂದೆಯು ಹೇಳುತ್ತಾರೆ – ನೀವು ಎಷ್ಟು ಧನವಂತರಾಗಿದ್ದಿರಿ, ವಿಶ್ವದ ಮಾಲೀಕರಾಗಿದ್ದಿರಿ, ಅಂದಮೇಲೆ ಈಗ ಏಕೆ ಕಂಗಾಲರಾಗಿದ್ದೀರಿ? ಇಷ್ಟೆಲ್ಲಾ ಹಣವು ಎಲ್ಲಿ ಹೋಯಿತು? ಮಕ್ಕಳೊಂದಿಗೇ ತಂದೆಯು ಹೇಳುತ್ತಾರೆ – ಭಾರತವನ್ನು ಇಷ್ಟು ಸಾಹುಕಾರನನ್ನಾಗಿ ಮಾಡಿದ್ದೆನು, ಎಲ್ಲಾ ಹಣವು ಎಲ್ಲಿಗೆ ಹೋಯಿತು? ಮತ್ತೆ ತಂದೆಯೇ ಕುಳಿತು ತಿಳಿಸುತ್ತಾರೆ – ಭಕ್ತಿಮಾರ್ಗದಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ, ಶಾಸ್ತ್ರಗಳ ಹಿಂದೆ ಎಷ್ಟೊಂದು ಖರ್ಚು ಮಾಡುತ್ತಾರೆ. ತಲೆಯನ್ನೂ ಬಾಗಿಸುತ್ತಾ ಬಂದಿರಿ, ಹಣೆಯು ಸವೆಯುತ್ತಾ ಹೋಯಿತು. ಹಣ ಇತ್ಯಾದಿಗಳೆಲ್ಲವನ್ನೂ ಕಳೆದುಕೊಂಡು ಕುಳಿತಿದ್ದೀರಿ. ಇದೂ ಸಹ ಡ್ರಾಮಾ ಆಗಿದೆ. ನಾನು ನಿಮ್ಮನ್ನು ಸಾಹುಕಾರರನ್ನಾಗಿ ಮಾಡಿದ್ದೇನೆ, ರಾವಣನು ನಿಮ್ಮನ್ನು ಕಂಗಾಲರನ್ನಾಗಿ ಮಾಡುತ್ತಾನೆ. ತಂದೆಯು ಭಾರತವಾಸಿಗಳಿಗೇ ತಿಳಿಸುತ್ತಾರಲ್ಲವೆ. ಭಾರತವೇ ಚಿನ್ನದ ಪಕ್ಷಿಯಾಗಿತ್ತು, ಬಹಳಷ್ಟು ಹಣವಿತ್ತು, ಅದನ್ನು ಅನ್ಯ ಧರ್ಮದವರು ಲೂಟಿ ಮಾಡಿಕೊಂಡು ಹೋದರು. ವಿಚಾರ ಮಾಡಿ – ಭಾರತವು ಹೇಗಿತ್ತು! ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ, ಭಾರತವೇ ಸ್ವರ್ಗ, ಭಾರತವೇ ನರಕ. ಭಾರತವು ಈಗ ನರಕವಾಗಿದೆ ಆದ್ದರಿಂದ ತಂದೆಯು ಏಣಿಯ ಚಿತ್ರವನ್ನು ಈ ರೀತಿ ಮಾಡಿಸಿದ್ದಾರೆ, ಅದನ್ನು ನೋಡಿದೊಡನೆಯೇ ನಾವು ಪತಿತರಾಗಿದ್ದೇವೆ ಎಂಬುದು ಅರ್ಥವಾಗಬೇಕು. ಚಿಕ್ಕ-ಚಿಕ್ಕ ಮಕ್ಕಳಿಗೂ ಸಹ ಚಿತ್ರದಲ್ಲಿ ತಿಳಿಸಲಾಗುತ್ತದೆ ಅಲ್ಲವೆ. ನಕ್ಷೆಯಿಲ್ಲದೆ ಮಕ್ಕಳಿಗೆ ಏನು ಅರ್ಥವಾಗುತ್ತದೆ, ತಂದೆಯೇ ಬಂದು ಪತಿತರಿಂದ ಪಾವನರಾಗುವ ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಇದು ಸಹಜಕ್ಕಿಂತ ಸಹಜವೂ ಆಗಿದೆ, ಬಹು ಕಷ್ಟವೂ ಆಗಿದೆ. ಸತ್ಯಯುಗದಲ್ಲಿ ದೇಹೀ-ಅಭಿಮಾನಿಯಾಗಿಯೂ ಇರುತ್ತಾರೆ. ಈಗ ಈ ಶರೀರವು ದೊಡ್ಡದಾಯಿತು, ಈ ಹಳೆಯ ವಸ್ತ್ರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕೆಂದು ಆತ್ಮವು ತಿಳಿದುಕೊಳ್ಳುತ್ತದೆ. ಹೇಗೆ ಸಾಕ್ಷಾತ್ಕಾರವಾಗುತ್ತದೆ – ಈಗ ಹೋಗಿ ಮಗುವಾಗಬೇಕು ಎಂದು. ಆಗ ಹಳೆಯ ಪೋರೆಯನ್ನು ಬಿಟ್ಟು ಬಿಡುತ್ತಾರೆ. ಇಲ್ಲಿ ಯಾರಾದರೂ ಸತ್ತರೆ ಅಳುತ್ತಾರೆ, ವಾದ್ಯಗಳನ್ನು ಮೊಳಗಿಸುತ್ತಾರೆ. ಸತ್ಯಯುಗದಲ್ಲಿ ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಅಲ್ಲಿ ಖುಷಿಯನ್ನಾಚರಿಸುತ್ತಾರೆ, ಇಲ್ಲಾದರೆ ಎಷ್ಟೊಂದು ದುಃಖ ಪಡುತ್ತಾರೆ. ಯಾರಾದರೂ ಶರೀರ ಬಿಟ್ಟರೆ ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ ಅಂದರೆ ಇದರ ಅರ್ಥ – ನರಕದಲ್ಲಿದ್ದರಲ್ಲವೆ! ನೀವೀಗ ಸ್ವರ್ಗವಾಸಿಗಳಾಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ, ತಂದೆಯು ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ತಂದೆಯು ಬರುವುದೇ ಜೀವನ್ಮುಕ್ತಿಯನ್ನು ಕೊಡಲು. ರಾವಣನ ಬಂಧನದಿಂದ ಬಿಡಿಸಿ ಜೀವನ್ಮುಕ್ತರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಕಲ್ಪದ ಮೊದಲಿನ ತರಹ ರಾಜಯೋಗವನ್ನು ಕಲಿಸುತ್ತೇನೆ. ಕಲ್ಪ-ಕಲ್ಪವೂ ಬ್ರಹ್ಮನ ತನುವಿನಲ್ಲಿಯೇ ಬರುತ್ತೇನೆ. ನೀವು ಅವಶ್ಯವಾಗಿ ಬ್ರಾಹ್ಮಣರಾಗಬೇಕಾಗಿದೆ. ಯಜ್ಞದಲ್ಲಿ ಬ್ರಾಹ್ಮಣರಂತೂ ಅವಶ್ಯವಾಗಿ ಬೇಕಲ್ಲವೆ. ಇದು ರಾಜಸ್ವ ಅಶ್ವಮೇಧ ಅವಿನಾಶಿ ಜ್ಞಾನ ಯಜ್ಞವಾಗಿದೆ. ಈ ರಥವನ್ನು ಸ್ವಾಹಾ ಮಾಡಬೇಕಾಗಿದೆ. ಈ ರಥಕ್ಕೆ ಅಶ್ವ ಎಂದು ಹೇಳಲಾಗುತ್ತದೆ. ರಾಜಸ್ವ, ಸ್ವರಾಜ್ಯಕ್ಕಾಗಿ ಈ ಎಲ್ಲಾ ಶರೀರಗಳೂ ಇದರಲ್ಲಿ ಸ್ವಾಹಾ ಆಗಬೇಕಾಗಿದೆ. ಆತ್ಮವಂತೂ ಸ್ವಾಹಾ ಆಗುವುದಿಲ್ಲ, ಆತ್ಮರು ಲೆಕ್ಕಾಚಾರಗಳನ್ನು ಮುಗಿಸಿ ಹಿಂತಿರುಗಿ ಹೋಗುವರು. ಮತ್ತೆ ಹೊಸದಾಗಿ ಎಲ್ಲರ ಪಾತ್ರವು ಆರಂಭವಾಗುವುದು, ಇದಕ್ಕೆ ಚರಿತ್ರೆ-ಭೂಗೋಳದ ಪುನರಾವರ್ತನೆಯೆಂದು ಹೇಳಲಾಗುವುದು. ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಿ, ಹಳೆಯ ಪ್ರಪಂಚವನ್ನು ಸಮಾಪ್ತಿ ಮಾಡಲು ತಂದೆಯು ಬರುತ್ತಾರೆ. ಇದೊಂದೇ ಮಹಾಭಾರತ ಯುದ್ಧವಾಗಿದೆ ಯಾವುದು ಶಾಸ್ತ್ರಗಳಲ್ಲಿ ಗಾಯನವಿದೆ ಆದ್ದರಿಂದ ತಿಳಿಸಬೇಕು – ಈ ಯುದ್ಧದಿಂದ ಸ್ವರ್ಗದ ಬಾಗಿಲು ತೆರೆಯುತ್ತದೆ ಆದ್ದರಿಂದ ಇದರ ಗಾಯನವು ಶಾಸ್ತ್ರಗಳಲ್ಲಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಕಳೆದು ಹೋದ ಮಾತುಗಳನ್ನು ಎಂದೂ ಚಿಂತನೆ ಮಾಡಬಾರದು. ಯಾವ ಮಾತು ಕಳೆದು ಹೋಯಿತೋ ಅದನ್ನು ನತಿಂಗ್ನ್ಯೂ (ಹೊಸದೇನಲ್ಲ) ಎಂದು ತಿಳಿದು ಮರೆತು ಬಿಡಬೇಕಾಗಿದೆ.

2. ಈ ರಾಜಸ್ವ ಅಶ್ವಮೇಧ ಯಜ್ಞದಲ್ಲಿ ತಮ್ಮ ತನು-ಮನ-ಧನ ಎಲ್ಲವನ್ನೂ ಸ್ವಾಹಾ ಮಾಡಿ ಸಫಲ ಮಾಡಿಕೊಳ್ಳಬೇಕಾಗಿದೆ. ಈ ಅಂತಿಮ ಜನ್ಮದಲ್ಲಿ ಸಂಪೂರ್ಣ ಪಾವನರಾಗುವ ಪರಿಶ್ರಮ ಪಡಬೇಕಾಗಿದೆ.

ವರದಾನ:-

ಯಾವುದೇ ಸಂಕಲ್ಪ, ಮಾತು ಅಥವಾ ಕರ್ಮವನ್ನು ಮಾಡುತ್ತೀರಿ – ಅದನ್ನು ಮಾಸ್ಟರ್ ತ್ರಿಕಾಲದರ್ಶಿ ಆಗಿದ್ದು ಮಾಡುತ್ತೀರೆಂದರೆ, ಯಾವುದೇ ಕರ್ಮವು ವ್ಯರ್ಥ ಅಥವಾ ಅನರ್ಥವಾಗಲು ಸಾಧ್ಯವಿಲ್ಲ. ತ್ರಿಕಾಲದರ್ಶಿ ಅರ್ಥಾತ್ ಸಾಕ್ಷಿ ಸ್ಥಿತಿಯಲ್ಲಿ ಸ್ಥಿತರಾಗಿದ್ದು, ಕರ್ಮಗಳ ಗುಹ್ಯ ಗತಿಯನ್ನು ತಿಳಿದುಕೊಂಡು, ಈ ಕರ್ಮೇಂದ್ರಿಯಗಳ ಮೂಲಕ ಕರ್ಮವನ್ನು ಮಾಡಿಸುತ್ತೀರೆಂದರೆ ಕರ್ಮವು ಬಂಧನದಲ್ಲೆಂದಿಗೂ ಬಂಧಿಸುವುದಿಲ್ಲ. ಪ್ರತಿಯೊಂದು ಕರ್ಮವನ್ನು ಮಾಡುತ್ತಾ ಕರ್ಮ ಬಂಧನ ಮುಕ್ತ, ಕರ್ಮಾತೀತ ಸ್ಥಿತಿಯ ಅನುಭವ ಮಾಡುತ್ತಾ ಇರುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top